ಎಡ್ರಾಮನಹಳ್ಳಿ ದೊಡ್ಡಭರಮಪ್ಪ
(1922- ). ತೊಗಲು ಗೊಂಬೆಯಾಟದ ಸುಪ್ರಸಿದ್ಧ ಕಲಾವಿದರು. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಎಡ್ರಾಮನಹಳ್ಳಿ ಗ್ರಾಮದಲ್ಲಿ ಕಿಳ್ಳಿಕೇತರ ಮನೆತನದಲ್ಲಿ ಜನಿಸಿದರು. ತಂದೆ ದೇವೇಂದ್ರಪ್ಪ, ತಾಯಿ ಕೆಂಚವ್ವ. ತೊಗಲುಗೊಂಬೆ ಆಟ ಪ್ರದರ್ಶಿಸುವುದು ಕಿಳ್ಳಿಕೇತರ ಕುಲಕಸುಬು. ದೊಡ್ಡಭರಮಪ್ಪನವರಿಗೆ ತೊಗಲುಗೊಂಬೆ ಆಟದ ತರಬೇತಿ ಅವರ ಅಜ್ಜಿ ಭರಮಜ್ಜಿಯಿಂದ ದೊರೆಯಿತು. ಅವಳ ಪ್ರೇರಣೆ - ಪ್ರೋತ್ಸಹಗಳಿಂದಾಗಿ ಪರಿಣತ ಕಲಾವಿದರಾಗಿ ರೂಪಗೊಂಡರು. ಅಜ್ಜಿಯಿಂದ ಬಳುವಳಿಯಾಗಿ ಬಂದ ನೂರಾರು ತೊಗಲು ಗೊಂಬೆಗಳನ್ನು ಬಳಸಿಕೊಂಡು ಹಳ್ಳಿಗಳಲ್ಲಿ ಪ್ರದರ್ಶಗಳನ್ನು ನೀಡುತ್ತ ಉಪಜೀವನ ಸಾಗಿಸಿದರು. ಹಳ್ಳಿಗರ ಅಭಿರುಚಿಯಲ್ಲಿ ಬದಲಾಣೆಯಾಗಿ ತೊಗಲುಗೊಂಬೆ ಆಟದ ಬಗ್ಗೆ ಆಕರ್ಷಣೆ ಕಡಿಮೆಯಾದ ಮೇಲೆ ದೊಡ್ಡಭರಮಪ್ಪನವರು ಅನಿವಾರ್ಯವಾಗಿ ತಮ್ಮ ಕುಲವೃತ್ತಿಯನ್ನು ಬಿಡಬೇಕಾಯಿತು. 70ರ ದಶಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಘಟಿಸಿದ ಅನೇಕ ಜನಪದ ಕಲಾಮೇಳಗಳಲ್ಲಿ ಪಾಲ್ಗೊಳ್ಳುವ ಅವಕಾಶ ಲಭ್ಯವಾದುದರಿಂದ ದೊಡ್ಡಭರಮಪ್ಪನವರು ತಮ್ಮ ಕಲಾಪ್ರದರ್ಶನ ಪುನಃ ಪ್ರಾರಂಭಿಸಿದರು. ಅವರ ಪ್ರದರ್ಶನಗಳ ಶ್ರೀಮಂತಿಕೆಯನ್ನು ಮತ್ತು ಅವರ ಸೃಜನಶೀಲತೆಯನ್ನು ವಿದ್ವಾಂಸರು ತುಂಬಾ ಮೆಚ್ಚಿಕೊಂಡಿದ್ದರಿಂದ ದೊಡ್ಡಭರಮಪ್ಪನವರು ಉತ್ಸಾಹಿತರಾದರು. ಅವರ ಮೇಳ ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಅನೇಕ ಕಮ್ಮಟಗಳಲ್ಲಿ ಉತ್ಸವಗಳಲ್ಲಿ ತನ್ನ ಪ್ರದರ್ಶನ ನೀಡಿದೆ. 1986ರಲ್ಲಿ ಪಶ್ಚಿಮ ಜರ್ಮನಿಯಲ್ಲಿ ನಡೆದ ಅಂತರ್‍ರಾಷ್ಟ್ರೀಯ ತೊಗಲುಗೊಂಬೆ ಆಟದ ಮಹೋತ್ಸವದಲ್ಲಿ ಪಾಲ್ಗೊಂಡು ಪ್ರದರ್ಶನ ನೀಡಿದ ಕೀರ್ತಿ ದೊಡ್ಡಭರಮಪ್ಪನವರದು. ಅಲ್ಲಿಯ ಬೋಕ್ಯುಂ, ಹೈಕ್ಸೋಗನ್ ಹರ್ಟ್, ಸ್ಟುಟ್‍ಗಾರ್ಟ್, ಬರ್ಲಿನ್, ಹ್ಯಾನೋವರ್, ಹೈಡಲ್‍ಬರ್ಗ್ ನಗರಗಳಲ್ಲಿ ದೊಡ್ಡಭರಮಪ್ಪನವರು ಪ್ರದರ್ಶಿಸಿದ 'ಸೀತಾಸ್ವಯಂವರ ತುಂಬಾ ಮೆಚ್ಚುಗೆ ಗಳಿಸಿತು. ಕರ್ನಾಟಕ ಸರಕಾರ ದೊಡ್ಡಭರಮಪ್ಪನವರಿಗೆ 1996ನೇ ಸಾಲಿನ 'ಜಾನಪದಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. 					
	(ಬಸವರಾಜು ಮಲಶೆಟ್ಟಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ